ಸಂಧ್ಯಾರಾಗ

 ಅ.ನ.ಕೃಷ್ಣರಾಯರ “ಸಂಧ್ಯಾರಾಗ” ಕಾದಂಬರಿಯನ್ನು ಓದಿದೆ. ಕಾದಂಬರಿಯಲ್ಲಿ ಕೆಲವು ಇಷ್ಟವಾದವು, ಇನ್ನು ಕೆಲವು ಕಷ್ಟವಾದವು. ಬಹುಶಃ ಎಪ್ಪತ್ತು-ಎಂಬತ್ತು ವರ್ಷದಷ್ಟು ಹಿಂದಿನ ಕಾದಂಬರಿಯನ್ನು ಈಗಿನ ಯುವ ಪೀಳಿಗೆಯಾದ ನಾನು, ಓದಿ ಅರ್ಥ ಮಾಡಿಕೊಂಡ ಪರಿಯಲ್ಲಿರುವ ವ್ಯತ್ಯಾಸಗಳೇ ಕೆಲವು ವಿಷಯ ಇಷ್ಟ ಆಗದೇ ಇರುವುದಕ್ಕೆ ಕಾರಣವೂ ಇರಬಹುದು. ಪ್ರಪ್ರಥಮವಾಗಿ ಇಷ್ಟವಾದ ಸಂಗತಿಗಳ ಪಟ್ಟಿ ಮಾಡುವ.

ಮೊದಲಿಗೆ, ಕಾದಂಬರಿ ಓದಿಸಿಕೊಂಡು ಹೋಗುವ ರೀತಿ. ಎಲ್ಲಿಯೂ ನೀರಸ ಅನಿಸುವುದಿಲ್ಲ. ಓದುತ್ತಿರುವಷ್ಟರಲ್ಲೇ ಕಾದಂಬರಿ ಮುಗಿದದ್ದೂ ಸಹ ತಿಳಿಯುವುದಿಲ್ಲ. ಹಾಗೇ ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಅದು ಬದಲಾವಣೆ ಹೊಂದುವ ರೀತಿ ತುಂಬಾ ಇಷ್ಟವಾಯಿತು. ಕಾದಂಬರಿಯ ವಿಷಯ ಅತ್ಯದ್ಭುತ, ಒಂದೊಂದು ಪಾತ್ರ ನಮ್ಮಲ್ಲಿರುವ ಒಂದೊಂದು ಗುಣಗಳ ಪ್ರತಿನಿಧಿಯಾಗಿವೆಯೇನೋ ಎನ್ನಿಸುತ್ತದೆ. ಕರುಣೆಗೆ ಮೀನಾಕ್ಷಮ್ಮನವರ ಪಾತ್ರ, ಎಲ್ಲರನ್ನೂ ಆದರದಿಂದ ಕಾಣಲು ಇರುವ ರಾಯರ ಪಾತ್ರ, ದುರಹಂಕಾರದ ಪ್ರತೀಕವಾಗಿ ರಾಮುವಿನ ಪಾತ್ರ, ಸಂಗೀತದ ಅದಮ್ಯ ಕಲಾಭಿಮಾನಿಯ ಪಾತ್ರದಲ್ಲಿ ಲಕ್ಷ್ಮಣ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪಾತ್ರದಲ್ಲಿ ಸಾವಿತ್ರಮ್ಮ, ಆದರ್ಶ ಪತ್ನಿ, ಸೊಸೆಯಾಗಿ ಜಯ, ವಿಧೇಯರಾಗಿ ಶಾಮಣ್ಣನವರು, ಮುಗ್ಧಳಾಗಿ ಶಾಂತ ಹೀಗೆ ಪ್ರತಿಯೊಂದು ಪಾತ್ರ ತನ್ನದೇ ಆದ ವೈಶಿಷ್ಟ್ಯತೆಯಿಂದ ಮನಸಲ್ಲಿ ನಿಲ್ಲುತ್ತವೆ. ಎಲ್ಲೂ ಯಾವ ಪಾತ್ರವನ್ನು ನಿರ್ಲಕ್ಷಿಸಿದರು ಎಂದೆನ್ನಿಸುವುದಿಲ್ಲ. ಮುಕ್ತಾಯದ ಹೊತ್ತಿಗೆ ಎಲ್ಲವೂ ಸಮರ್ಪಕವಾಗಿ ಮುಗಿಯುತ್ತವೆ. ಯಾವ ಪಾತ್ರವನ್ನೂ ಕಡೆಗಣಿಸಿಲ್ಲ.

ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುವದರಲ್ಲಿ ನಾವು ತುಂಬಾ ಮೆಚ್ಚಿದ ವ್ಯಕ್ತಿಯನ್ನು ಅನುಸರಿಸುವುದು ಸಹಜ. ಇದನ್ನು ಶ್ರೀನಿವಾಸ ರಾಯರ ವ್ಯಕ್ತಿತ್ವ ರೂಪುಗೊಂಡ ಬಗೆಯಲ್ಲಿ ಕಾಣಬಹುದು. ಮಹಾಭಾರತದ ಕರ್ಣನ ಪಾತ್ರವನ್ನು ತುಂಬಾ ಮೆಚ್ಚಿದ್ದ ರಾಯರು ದಯಾಮಯರಾಗಿದ್ದರು ಎನಿಸುತ್ತದೆ. ಕರ್ಣನ ಮೇಲಿದ್ದ ತಮಗಿದ್ದ ಭಕ್ತಿ ಪ್ರೀತಿಗಳನ್ನು ಅವರು ಜೀವನದಲ್ಲಿಯೂ ಅಳವಡಿಸಿಕೊಂಡಂತೆ ತೋರುತ್ತದೆ. ಎರಡನೇ ಮದುವೆಗೆ ತಮ್ಮ ಪತ್ನಿಯೇ ಬಲವಂತ ಪಡಿಸಿದಾಗ, ತಾಯಿಯ ಮಾತಿಗೆ ಬೆಲೆಕೊಟ್ಟು ಕರ್ಣ ದುರ್ಯೋಧನನನ್ನು ಬಲಿ ಕೊಟ್ಟಂತೆ, ತಾವು ತಮ್ಮ ಮೊದಲ ಪತ್ನಿಯನ್ನು ಬಲಿ ಕೊಡುತ್ತೆವೇನೋ ಎಂದು ನೊಂದುಕೊಳ್ಳುತ್ತಾರೆ. ರಾಯರ ಔದಾರ್ಯ, ತುಂಬು ಕುಟುಂಬದ ಚಿತ್ರಣ, ಹಳ್ಳಿಯ ಬದುಕು, ಅದು ಒಂದಕ್ಕೊಂದು ಬೆಸೆದುಕೊಂಡ ರೀತಿ, ನಂತರ ಬೆಂಗಳೂರು ನಗರದ ವಾಸ, ಬದಲಾವಣೆಗೆ ಒಗ್ಗಿಕೊಳ್ಳುವ ಮನುಷ್ಯನ ಜೀವನ ಎಲ್ಲವೂ ಕಾದಂಬರಿಯಲ್ಲಿ ಸುಲಲಿತವಾಗಿ ನದಿಯ ಒಳ ಹರಿವಿನಂತೆ ಮೂಡಿ ಬಂದಿದೆ.

ಲಕ್ಷ್ಮಣನ ಸಂಗೀತ ಕಲೆಯನ್ನು ಹೇಳುವಲ್ಲಿ ಅ.ನ.ಕೃ ರವರು ಸೂಕ್ಷ್ಮವಾಗಿ ಮೀಮಾಂಸೆಯ ಭಾಗಗಳನ್ನೂ ಪರಿಚಯಿಸಿದ್ದಾರೆ. “ಕಲಿಯುವವರೆಲ್ಲರಿಗೂ ಶಾಸ್ತ್ರ ಬರುತ್ತೆ, ಅದು ಬುದ್ಧಿಗೋಚರ. ಆದರೆ, ಕಲೆ ಬರುವುದಿಲ್ಲ, ಅದು ಚಿತ್ತವೇದ್ಯ”. ಈ ಮಾತು ನನಗೆ ಪ್ರತಿಭೆ ಮತ್ತು ಪಾಂಡಿತ್ಯಕ್ಕೆ ಇರುವ ವ್ಯತ್ಯಾಸವನ್ನು ಹೇಳಿದಂತಿದೆ. ಅದೇ ರೀತಿ ಗೋಪಾಲನ ಬಾಯಿಂದ ಶಿಕ್ಷಣ ಪದ್ಧತಿಯ ಬಗೆಗೆ ನುಡಿಸುವ ಮಾತು ಇಂದಿಗೂ ಅನ್ವಯಿಸುತ್ತದೆ, “ಅಚ್ಚಿನ ಇಟ್ಟಿಗೆಗಳನ್ನು ತಯಾರಿಸಿದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಬಗೆಯ ಶಿಕ್ಷಣವನ್ನಿತ್ತು, ಒಂದೇ ಎರಕದಲ್ಲಿ ಅವರನ್ನು ಹುಯ್ಯುತ್ತಿರುವುದು ಕಾರ್ಖಾನೆಯ ಪದ್ಧತಿ”. ಈ ಮಾತು ಈಗಿನ ನಮ್ಮ ಶಿಕ್ಷಣ ಪದ್ಧತಿಗೆ, ಬದಲಾಗದಿದ್ದರೆ, ಇನ್ನು ಮುಂದಕ್ಕೂ ಅನ್ವಯಿಸುತ್ತದೆ.

ಸಂಧ್ಯಾರಾಗ ಮುಖ್ಯವಾಗಿ ಒಬ್ಬ ಕಲಾವಿದನ ಜೀವನವನ್ನು ಕೇಂದ್ರವಾಗಿಟ್ಟುಕೊಂಡು, ಅದರ ಸುತ್ತಲೂ ಬೇರೆಲ್ಲ ಪಾತ್ರಗಳನ್ನೂ ಹೆಣೆದಿರುವುದರಿಂದ ಸಹಜವಾಗಿ ಕಲೆಯ ಕುರಿತಾದದನ್ನು ಮನಮುಟ್ಟುವಂತೆ ಹೇಳಿದ್ದಾರೆ. “ಜನತೆಯ ಆಸೆ ಮುಗಿಯುವಲ್ಲಿ ಕಲಾವಿದನ ಆಸೆ ಪ್ರಾರಂಭವಾಗುತ್ತದೆ. ಜನತೆಗೆ ಯಾವುದು ಹಿತವಾಗುತ್ತದೋ ಅದು ಕಲಾವಿದನಿಗೆ ಅಹಿತವಾಗುತ್ತದೆ. ಜನತೆಗೆಲ್ಲಿ ತೃಪ್ತಿ ತೋರುವುದೋ ಕಲಾವಿದನಲ್ಲಿ ಅತೃಪ್ತಿ ಮೊಳೆಯುತ್ತದೆ”- ಈ ವಾಕ್ಯ ಇಡೀ ಕಲಾ ಸಮುದಾಯಕ್ಕೆ ಅಂದರೆ ಸಂಗೀತ, ಸಾಹಿತ್ಯ, ಶಿಲ್ಪಕಲೆ ಮುಂತಾದ ಎಲ್ಲರಿಗೂ ಅನ್ವಯಿಸುತ್ತದೆ. ಇನ್ನೇನೋ ಮಾಡಬೇಕು, ಮತ್ತೇನನ್ನೋ ಹೇಳಬೇಕು ಎನ್ನುವ ಮನಸ್ಸಿನ ಹಂಬಲವನ್ನು ಸೂಚಿಸುತ್ತದೆ. ಮನಸ್ಸಿನಲ್ಲಿ ಮೂಡಿದ ಎಲ್ಲವನ್ನು ಕಲೆಯ ಮೂಲಕ ವ್ಯಕ್ತಪಡಿಸುವುದು ಅಸಾಧ್ಯ. ಎಣಿಸಿದಷ್ಟನ್ನು ಅಭಿವ್ಯಕ್ತಪಡಿಸುವುದು ಸಾಧ್ಯವಾಗದಿರುವುದು ಬುದ್ಧಿಗಿರುವ ಸಹಜ ಕುಂಟುತನ.

ಶ್ರೀನಿವಾಸ ರಾಯರ ಮನೆಯಲ್ಲಿ ಪೂರ್ವಜರು ಯಾರು ಅಂತಹ ಸಂಗೀತ ವಿದ್ವಾನರಿಲ್ಲದಿದ್ದರೂ ಲಕ್ಷ್ಮಣನಲ್ಲಿ ಅವ್ಯಾಹತವಾಗಿ ಬಂದ ಸಂಗೀತ ವಿದ್ಯೆ ಪೂರ್ವ ಜನ್ಮದ ಸಂಸ್ಕಾರದ ಫಲ ಎಂಬುದನ್ನು ಎತ್ತಿ ತೋರಿಸುತ್ತದೆ. ನಾದದೇವಿ ಎಲ್ಲರಿಗೂ ಸುಲಭಕ್ಕೆ ಒಲಿಯುವುದಿಲ್ಲ, ಬಹು ಜನ್ಮದ ಸಂಸ್ಕಾರವಿದ್ದರೆ ಮಾತ್ರ ಆಕೆ ಬಂದು ನಮ್ಮಲ್ಲಿ ನೆಲೆಸುತ್ತಾಳೆ. ಈ ನಿಟ್ಟಿನಲ್ಲಿ ಅನಕೃ ರವರು ಅಲ್ಲಲ್ಲಿ ಮಾಡಿಕೊಡುವ ರಾಗಗಳ ಪರಿಚಯ, ಕೀರ್ತನೆಗಳ ಸಾಲುಗಳು ಕಾದಂಬರಿಯನ್ನು ಮತ್ತಷ್ಟು ಕಳೆಗಟ್ಟಿಸುತ್ತವೆ.

ಇನ್ನು ಕೇವಲ ಪತಿವ್ರತೆಯರ ಕಥೆಗಳನ್ನು ಕೇಳಿದ್ದ ನಮಗೆ ಅಪೂರ್ವ ಎನಿಸುವಂತಹ ಸತಿವ್ರತರು ಇದ್ದಾರೆ ಎಂಬುದನ್ನು ರಾಯರ ಪಾತ್ರದ ಮೂಲಕ ತೋರಿಸಿದ್ದಾರೆ. ನನಗೆ ಕೃತಿಯಲ್ಲಿ ಸ್ವಲ್ಪ ಅಸಮಾಧಾನ ಮೂಡಿಸಿದ ಸಂಗತಿ ಈ ವಿಷಯದಲ್ಲೇ, ಅದೂ ಲಕ್ಷ್ಮಣನ ವಿಷಯದಲ್ಲಿ. ಶ್ರೀನಿವಾಸ ರಾಯರ ಮರಣಾನಂತರ ತಾನಾಯ್ತು, ತನ್ನ ಸಂಗೀತಾಭ್ಯಾಸವಾಯ್ತು ಎಂದು ಅದರಲ್ಲೇ ತಲ್ಲೀನನಾದ ಲಕ್ಷ್ಮಣ, ಗರ್ಭಿಣಿಯಾದ ತನ್ನ ಹೆಂಡತಿಯ ಕಾಳಜಿಯನ್ನು ತಾನು ಮಾಡಬೇಕಿತ್ತಲ್ಲವೇ? ತನ್ನ ಅಣ್ಣ ಮತ್ತು ಅತ್ತಿಗೆ, ತನ್ನ ಹೆಂಡತಿಯನ್ನು ಹೀನಾಯವಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ನೋಡಿಯೂ ಏನೂ ಮಾಡದೇ ಇದ್ದದ್ದು ಎಷ್ಟು ಸರಿ? ಆಕೆಗೆ ತಾನು ಸಹಾಯಕನಾಗಿ ನಿಲ್ಲಬಹುದಿತ್ತಲ್ಲವೇ? ಹೆಂಡತಿಯ ಮರಣಾನಂತರ ಊರೂರಲೆದು ತಂಜಾವೂರಿಗೆ ಬಂದು ಅಲ್ಲಿ ಗುರುಗಳ ಸೇವೆ ಮಾಡುತ್ತಾ, ಗುರು ಪತ್ನಿಯನ್ನು ತಾಯಿ ಸ್ಥಾನದಲ್ಲಿ ನೋಡುತ್ತಾ ಅಲ್ಲಿ ಮನೆ ಕೆಲಸವನ್ನೆಲ್ಲವನ್ನೂ ಮಾಡುವಷ್ಟು ವಿವೇಚನೆ ಇದ್ದ ವ್ಯಕ್ತಿ, ಹೆಂಡತಿಗೂ ಸಹಾಯ ಮಾಡಬಹುದಿತ್ತಲ್ಲ? ತನ್ನ ಹೆಂಡತಿಯ ಸಾವಿಗೆ ತನ್ನ ಅಣ್ಣ ಮತ್ತು ಅತ್ತಿಗೆಯ ಕ್ರೂರ ನಡತೆ ಮಾತ್ರ ಹೊಣೆ ಎಂದು ತನಗೆ ತಾನೇ ಸಾಂತ್ವನ ಮಾಡಿಕೊಂಡು, ತನ್ನ ತಪ್ಪೇನೂ ಇಲ್ಲ ಎಂದು, ಕೇವಲ ಹೆಂಡತಿಯನ್ನು ನೆನೆದು ದುಃಖ ಪಡುವ ಲಕ್ಷ್ಮಣನ ಈ ಮುಖ ನನಗಷ್ಟು ಇಷ್ಟವಾಗಲಿಲ್ಲ.

ಹಿಂಸೆಯಿಂದ ದೊಡ್ದವರಾಗುವುದಕ್ಕಿಂತ ಕ್ಷಮಿಸಿ ಚಿಕ್ಕವರಾದರೂ ಚಿಂತೆಯಿಲ್ಲ ಎನ್ನುವ ಮನೋಭಾವ ಶಾಂತ ಮೂರ್ತಿಯಾದ ಶಾಂತಾಳಲ್ಲಿ ಕಾಣಿಸುತ್ತದೆ. ಅದೇ ಗಂಡನಿಗೆ ಪ್ರೇರಣೆಯಾಗಿ ವೆಂಕಟೇಶ, ರಾಮುವಿಗೆ ಸಹಾಯ ಮಾಡಲು ಕಾರಣವಾಗುತ್ತದೆ. ರಾಮುವಿನ ಪಾತ್ರ ಮೊದಲಿಗೆ ಕ್ರೂರಿಯಾಗಿ, ಭ್ರಷ್ಟನಾಗಿ ಕೊನೆಗೆ ಜೀವನದಲ್ಲಿ ಸಹಬಾಳ್ವೆಯ ಪಾಠ ಕಲಿತು ಬದಲಾವಣೆಯ ಗಾಳಿ ಬೀಸಿ ನೆಮ್ಮದಿಯಿಂದಿರುವದನ್ನು ಚಿತ್ರಿಸಿದ್ದಾರೆ. ಇದು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ. ದ್ವೇಷ ಮತ್ತೆ ದ್ವೇಷಕ್ಕೆ ಮರಿ ಹಾಕುತ್ತದೆಯೇ ವಿನಃ ಮುಕ್ತಾಯವಾಗುವುದಿಲ್ಲ.

ದಕ್ಷಿಣಾದಿ ಸಂಗೀತವೆಂದರೆ ಕೇವಲ ಲಯ ಪ್ರಧಾನವಾದ ಸಂಗೀತವೆಂಬುದು ಈಗಲೂ ಮನೆ ಮಾಡಿದಂತಿದೆ. ಆದರೆ ನಿಜವಾದ ಸಂಗೀತ ಶ್ರುತಿ ಮತ್ತು ಲಯ ಎರಡಕ್ಕೂ ಸಮಾನ ಪ್ರಾಶಸ್ತ್ಯ ನೀಡುತ್ತದೆ ಎಂಬುದನ್ನು ಸ್ಥೂಲವಾಗಿ ಲೇಖಕರು ತಿಳಿಸಿದ್ದಾರೆ. ಸೂಕ್ಷ್ಮವಾಗಿ ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತದ ಪರಿಚಯವನ್ನೂ ಮಾಡಿಕೊಡುತ್ತಾರೆ. ನಮ್ಮಲ್ಲಿರುವ ಭಂಡಾರವನ್ನು ನಾವು ನಿರ್ಲಕ್ಷಿಸಿ ಕೇವಲ ಬೇರೆ ಭಾಷೆಗಳಿಂದ ಮಾತ್ರ ಕೀರ್ತನೆಗಳನ್ನು ಎರವಲು ಪಡೆಯಬಾರದು, ನಮ್ಮಲ್ಲಿರುವ ದಾಸರ ಕೀರ್ತನೆಗಳು, ಶರಣರ ವಚನಗಳನ್ನು, ಪಂಡಿತರಾದವರು ಸೂಕ್ತ ಸಂಗೀತಕ್ಕೆ ಅಳವಡಿಸಿ ಜನಮಾನಸಕ್ಕೆ ಉಣಬಡಿಸಬೇಕೆಂಬುದನ್ನು ಸಾರಿದ್ದಾರೆ ಲೇಖಕರು.

ಒಟ್ಟಿನಲ್ಲಿ, ಸಂಧ್ಯಾರಾಗ ಒಂದು ಅಪೂರ್ವ ಕೃತಿ. ಕನ್ನಡ ಸಾರಸ್ವತ ಲೋಕಕ್ಕೆ ಅನಕೃ ರವರ ಅತ್ಯಮೂಲ್ಯ ಕೊಡುಗೆ. ಕೊನೆಯಲ್ಲಿ ಕಾದಂಬರಿ ಮುಗಿಯುವ ಹೊತ್ತಿಗೆ ಡಾ.ರಾಜ್ ಕುಮಾರ್ ಅಭಿನಯದ ‘ಸಂಧ್ಯಾರಾಗ’ದ ಪಾತ್ರಗಳು ಕಣ್ಣ ಮುಂದೆ ಬಂದಿದ್ದವು, ಮತ್ತು ಇಬ್ಬರು ಮಹಾನ್ ದಿಗ್ಗಜರಾದ ಪಂಡಿತ್ ಬಾಲಮುರಳಿಕೃಷ್ಣ ಮತ್ತು ಪಂಡಿತ್ ಭೀಮಸೇನ್ ಜೋಶಿ ಅವರ ಕಂಠದಲ್ಲಿ ಅಪೂರ್ವವಾಗಿ ಮೂಡಿ ಬಂದ ‘ನಂಬಿದೆ ನಿನ್ನ ನಾದದೇವತೆಯೆ……..’ ಹಾಡು ಕಿವಿಯಲ್ಲಿ ಮೊಳಗುತ್ತಿತ್ತು.

Popular posts from this blog

ಕೃಷ್ಣೇಗೌಡನ ಆನೆ. ಕೆ .ಪಿ ಪೂರ್ಣಚಂದ್ರ ತೇಜಸ್ವಿ

ಪರ್ವ

ಮೂಕಜ್ಜಿಯ ಕನಸು